ಟ್ಯೂನಿಕೇಟ
ಕಾರ್ಡೇಟ ವಂಶಕ್ಕೆ ಸೇರಿದ ಒಂದು ಉಪವಂಶ ಯೂರೊಕಾರ್ಡೇಟ ಪರ್ಯಾಯ ನಾಮ. ಇದರಲ್ಲಿ 2,000 ಪ್ರಭೇದಗಳಿವೆ. ಇವು ಸಮುದ್ರವಾಸಿಗಳು ; ಸಾಧಾರಣವಾಗಿ ಆಸರೆಗೆ ಅಂಟಿಕೊಂಡು ಜೀವಿಸುವ ಸ್ಥಾಯಿಜೀವಿಗಳು ಮತ್ತು ಒಂಟಿಜೀವನವನ್ನು ನಡೆಸುವಂಥವು. ದೇಹ ಮೊಟಕಾಗಿದೆ. ಜೀವಿಯ ಅಧೋಭಾಗದ ವಿಸ್ತರಣೆಯಿಂದಾಗಿ ಊಧ್ರ್ವಭಾಗ ಹ್ರಸ್ವಗೊಂಡು ಬಾಯಿ ಮತ್ತು ಏಟ್ರಿಯಮಿನ ದ್ವಾರಗಳು ಬಹುಮಟ್ಟಿಗೆ ಸಮೀಪದಲ್ಲಿರುತ್ತವೆ. ಬಾಯಿಯ ಮೂಲಕ ನೀರು ಸದಾ ಒಳ ಹೋಗುತ್ತಿದ್ದು ಜೀವಿಗೆ ಬೇಕಾದ ಆಹಾರ ಮತ್ತು ಆಮ್ಲಜನಕವನ್ನು ಕೊಂಡೊಯ್ಯುತ್ತದೆ. ಹೀಗೆ ದೇಹವನ್ನು ಪ್ರವೇಶಿಸಿದ ನೀರು ಹೊರಬರುವಾಗ ವಿಸರ್ಜನ ವಸ್ತುಗಳನ್ನೂ ಸಂಯೋಗಿ ಕಣಗಳನ್ನೂ ಹೊರತರುತ್ತದೆ. ಅಕಸ್ಮಾತ್ತಾಗಿ ಜೀವಿಯ ದೇಹವನ್ನು ಮುಟ್ಟಿದರೆ ಬಾಯಿ ಮತ್ತು ಏಟ್ರಿಯಮ್ ದ್ವಾರಗಳಿಂದ ನೀರು ಪಿಚಕಾರಿ ಹೊಡೆದಂತೆ ಹೊರಬರುವುದು ಹಾಗಾಗಿ ಇವನ್ನು "ಕಡಲ ಕಾರಂಜಿ" ಎನ್ನುವರು. ದೇಹ ಮೃದುವಾಗಿದ್ದು ಟೆಸ್ಟ್ ಅಥವಾ ಟ್ಯೂನಿಕ್ ಎಂಬ ಕವಚದಲ್ಲಿ ಅಡಗಿರುತ್ತದೆ. ಗಂಟಲ ಕುಹರ ವಿಸ್ತಾರವಾಗಿ ಬೆಳೆದಿದೆ. ಇದರ ಇಕ್ಕಡೆಗಳಲ್ಲಿ ಶಿಲಕೆಗಳಿರುವ ಕಿವಿರಿನ ರಂಧ್ರಗಳಿವೆ. ಗಂಟಲಿನೊಳಗೆ ಉದ್ದಕೂ ಗ್ರಂಥಿಗಳು ಮತ್ತು ಉದ್ದವಾದ ಶಿಲಕೆಗಳುಳ್ಳ ಎಂಡೋಸ್ಟೈಲ್ ಇವೆ. ಇದು ಆಹಾರಾರ್ಜನೆಗೆ ನೆರವಾಗುವ ರಚನೆ. ಜೀರ್ಣನಾಳದ ಒಳಭಾಗದಲ್ಲೂ ಶಿಲಕೆಗಳುಂಟು. ಗಂಟಲಿನಿಂದ ಮುಂದಕ್ಕೆ ಅನ್ನನಾಳ, ಜಠರ ಮತ್ತು ಕರುಳಿನ ಭಾಗಗಳಿವೆ. ವಿಸರ್ಜನ ವಸ್ತು ಕೆಲವು ವೇಳೆ ಅಮೋನಿಯ ರೂಪದಲ್ಲಿ ನೆಫ್ರೊಸೈಟ್ಸ್ ಕೋಶಗಳಲ್ಲಿ ಅಥವಾ ತೆಳುವಾದ ಪಾರದರ್ಶಕ ವಿಸರ್ಜನೆ ಕೋಶಗಳಲ್ಲಿ ಸಂಗ್ರಹವಾಗುತ್ತದೆ. ಹೃದಯ ಒಂದು ಸಣ್ಣ ನಾಳದಂತಿರುವ ಕೊಳವೆ. ಆಗಿಂದ್ದಾಗ್ಗೆ ರಕ್ತಪರಿಚಲನ ದಿಕ್ಕು ಬದಲಾಗುವುದುಂಟು.

	ಇವು ಉಭಯಲಿಂಗಿಗಳು. ನಿಷೇಚನೆ ಜೀವಿಯ ದೇಹದೊಳಗೆ ಅಥವಾ ಸಮುದ್ರದ ನೀರಿನಲ್ಲಿ ನಡೆಯುವುದು. ನಿಷೇಚಿತ ಅಂಡಗಳು ಕಪ್ಪೆಯ ಗೊದಮೊಟ್ಟೆಗಳನ್ನು ಹೋಲುವಂಥ ಅಸಿಡಿಯನ್ ಗೊದಮೊಟ್ಟೆಗಳು. ಈ ಘಟ್ಟದಲ್ಲಿ ಇವಕ್ಕೆ ಉದ್ದವಾದ ಸ್ನಾಯುವುಳ್ಳ ಬಾಲ, ನೋಟೊಕಾರ್ಡ್, ಟೊಳ್ಳಾದ ನರತಂತು, ಮಿದುಳು, ಜ್ಞಾನೇಂದ್ರಿಯಗಳು ಮತ್ತು ಆಸರೆಗೆ ಅಂಟಲು ಸಹಾಯಕವಾಗುವ ರಚನೆಗಳು ಇವೆ. ಈ ಡಿಂಬಗಳು ಬಾಲದ ಸಹಾಯದಿಂದ ಸ್ವಲ್ಪ ಕಾಲ ಈಜಾಡುತ್ತ ಸ್ವತಂತ್ರ ಜೀವನವನ್ನು ನಡೆಸಿ ಯಾವುದಾದರೂ ಒಂದು ಆಸರೆಗೆ ಅಂಟಿಕೊಂಡು ರೂಪಪರಿವರ್ತನೆಗೊಳಗಾಗಿ ಪ್ರೌಢಜೀವಿಗಳಾಗಿ ಬೆಳೆಯುವುವು.

	ಈ ಗುಂಪಿನ ಪ್ರಾಣಿಗಳು ಪ್ರಪಂಚದ ಎಲ್ಲ ಸಮುದ್ರಗಳಲ್ಲಿಯೂ ಕಂಡುಬರುತ್ತವೆ. ಇದರಲ್ಲಿ ಅಸಿಡಿಯೇಸಿಯ. ತ್ಯಾಲಿಯೇಸಿಯ ಮತ್ತು ಲಾರ್ವೇಸಿಯ ಎಂಬ ಮೂರು ವರ್ಗಗಳಿವೆ. 
1. ಅಸಿಡಿಯೇಸಿಯಾ: ಒಂಟಿಜೀವಿಗಳಾದ ಹರ್ಡ್‍ಮೇನಿಯ ಮತ್ತು ಅಸಿಡಿಯ ಹಾಗೂ ಆಸರೆಗೆ ಅಂಟಿಕೊಂಡು ಬೆಳೆಯುವ ಬಾಟ್ರಲಸ್ ಮತ್ತು ಪಾಲಿಕ್ಲೈನಂ.

	2. ತ್ಯಾಲಯೇಸಿಯ ಪೀಪಾಯಿ ಆಕಾರಹೊಂದಿವೆ. ಹೊರಕವಚ ತೆಳುವಾಗಿ ಪಾರದರ್ಶಕವಾಗಿದೆ. ಬಾಯಿ ಮತ್ತು ಏಟ್ರಿಯಮ್ ದ್ವಾರಗಳು ದೇಹದ ಎದುರು ತುದಿಗಳಲ್ಲಿವೆ. ಬಾಯಿಯ ಮೂಲಕ ದೇಹದೊಳಗೆ ಹೊಕ್ಕ ನೀರು ದೇಹದ ಸುತ್ತಲಿರುವ ಸ್ನಾಯುಪಟ್ಟಿಗಳ ಸಂಕುಚನದಿಂದ ಹಿಂದಕ್ಕೆ ಬಂದು ಹೊರಬಿಳುವುದು. ಆಗ ಜೀವಿ ಮುಂದಕ್ಕೆ ಚಲಿಸುತ್ತದೆ. ನಿಷೇಚಿತ ಅಂಡಗಳು ಈಜುಡಿಂಬಗಳಾಗಿ ಬೆಳೆಯುವುವು. ಮರಿಗಳಲ್ಲಿ ಗಂಟಲಿನ ತಳ ಹಿಂಭಾಗದಲ್ಲಿ ಒಂದು ಕೊಳವೆಯಂಥ ರಚನೆ (ಸ್ಟೋಲನ್) ಬೆಳೆದು ಅದರ ತುದಿಯಲ್ಲಿ ಮೊಗ್ಗುಗಳೊಡೆಯುವುವು. ಅನಂತರ ಮೊಗ್ಗುಗಳು ಬೇರ್ಪಟ್ಟು ಲಿಂಗರೀತಿಯಲ್ಲಿ ಪುನರುತ್ಪಾದಿಸುವ ಬ್ಲ್ಯಾಸ್ಟೋಜೂóಆಯಿಡ್ ಜೀವಿಗಳಾಗುವುವು. ಡೋಲಿಯೋಲಮ್. ಸಾಲ್ಪ ಮತ್ತು ಪೈರೋಸೋಮ ಕೆಲವು ಉದಾಹರಣೆಗಳು. ಪೈರೋಸೋಮಕ್ಕೆ ಸಂದೀಪ್ತಿ ಸಾಮಥ್ರ್ಯವುಂಟು.

	3. ಲಾರ್ವೇಸಿಯ ಇವು ಬಲು ಸಣ್ಣ ಗಾತ್ರದ ಜೀವಿಗಳು. ಜಿಲಟಿನ್ ವಸ್ತುವಿನಿಂದ ಕೂಡಿದ ಹೊರಕವಚವನ್ನು ರಚಿಸಿಕೊಂಡು ಜೀವಿಸುವುವು. ಆಗಿಂದಾಗ್ಗೆ ತ್ಯಜಿಸಿ ಹೊಸದೊಂದು ಹೊರಕವಚವನ್ನು ರಚಿಸಿಕೊಳ್ಳುವುವು. ಏಟ್ರಿಯಮ್ ಇಲ್ಲದಿರುವುದು ಇವುಗಳ ವೈಶಿಷ್ಟ್ಯ. ಇವು ರೂಪ ಪರಿವರ್ತನೆಯಾಗದ ಹಾಗೂ ಡಿಂಬಾವಸ್ಥೆಯಲ್ಲಿ ಪುನರುತ್ಪಾದನಸಾಮಥ್ರ್ಯವನ್ನು ತೋರುವ ತ್ಯಾಲಿಯೇಸಿಗಳೆಂಬ ವಾದವೂ ಉಂಟು.

	ಇತರ ಕಾರ್ಡೇಟ್ ಪ್ರಾಣಿಗಳಿಗೂ ಟ್ಯೂನಿಕೇಟುಗಳಿಗೂ ಇರುವ ಮುಖ್ಯ ವ್ಯಾತ್ಯಾಸಗಳು : ಅಸಿಡಿಯನ್ ಗೊದಮೊಟ್ಟೆಯ ಮುಂಡದ ಹಿಂಭಾಗದಲ್ಲಿ ಮತ್ತು ಬಾಲದಲ್ಲಿ ಮಾತ್ರ ನೋಟೊಕಾರ್ಡ್ ಇದೆ. ರೂಪಪರಿವರ್ತನೆಯಾಗುವಾಗ ಊಧ್ರ್ವಭಾಗದಲ್ಲಿನ ನರತಂತು ಮತ್ತು ನೋಟೊಕಾರ್ಡ್‍ಗಳು ಅಳಿದುಹೋಗುವುವು. ಮೀಸೋಡರ್ಮಿನ ಜೀವಕೋಶಗಳು ಸ್ನಾಯುಖಂಡಗಳಾಗಿ ರೂಪುಗೊಳ್ಳುವುದಿಲ್ಲ. ಇತರ ಕಾರ್ಡೇಟಗಳಲ್ಲಿ ಇರುವಂಥ ವಲಯ ವಿಭಜನೆ ಇಲ್ಲಿ ಇಲ್ಲ. ದೇಹಾಂತರಾವಕಾಶದಲ್ಲಿ ಸೀಲಾಮಿಕ್ ಅನುಲೇಪಕ ಕೋಶಗಳಿಲ್ಲ. ಬದಲಾಗಿ ರಕ್ತ ತುಂಬಿರುತ್ತದೆ. ಗಂಟಲಿನ ಹಿಂಭಾಗದಿಂದ ಒಂದು ಅಥವಾ ಎರಡು ಎಪಿಕಾರ್ಡಿಯಮ್ ಕೊಳವೆಗಳು ಅಥವಾ ಅವಕಾಶಗಳು ಬೆಳೆಯುತ್ತವೆ. ಮ್ಯಾಂಟಲ್ ಹೊರಹೊದಿಕೆಗೂ ಗಂಟಲಿಗೂ ನಡುವೆ ಏಟ್ರಿಯಮ್ ಎಂಬ ಅವಕಾಶ ರೂಪುಗೊಳ್ಳುವುದು. ಮೃದುವಾದ ದೇಹದ ಸುತ್ತಲೂ ಗಡುಸಾದ ಟೆಸ್ಟ್ ಅಥವಾ ಟ್ಯೂನಿಕ್ ಹೊರಹೊದಿಕೆ ಉಂಟು. ಟೆಸ್ಟ್ ಕವಚ ಸೆಲ್ಯುಲೋಸ್ ಮತ್ತು ಅದಕ್ಕೆ ಸಂಬಂಧಿಸಿದ ಪಾಲಿಸ್ಯಾಕರೈಡ್ ವಸ್ತುವಿನಿಂದ ರಚಿತವಾಗಿದೆ. ಸುಣ್ಣದಿಂದ ಅಥವಾ ಸಾವಯವ ವಸ್ತುವಿನಿಂದ ನಿರ್ಮಿತವಾದ ಸೂಕ್ಷ್ಮ ಮುಳ್ಳುಗಳು, ರಕ್ತನಾಳಗಳು ಮತ್ತು ನರಗಳ ಕವಲುಗಳು ಇವೆ. ಎಲ್ಲ ಪ್ರಭೇದಗಳೂ ಉಭಯಲಿಂಗಿಗಳು.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ